ಶೈಕ್ಷಣಿಕ ಗುರಿ ತಲುಪಲು ಶ್ರದ್ಧೆ ಅವಶ್ಯಕ: ಬಿ.ಜಿ.ಹೂಗಾರ್

ಕೊಪ್ಪಳ:ನಿರಂತರ ಶ್ರದ್ಧೆ ಮತ್ತು ಸತತ ಪ್ರಯತ್ನದಿಂದ ಮಾತ್ರ ಶಿಕ್ಷಣದಲ್ಲಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಜಿ.ಹೂಗಾರ್ ಅವರು ಹೇಳಿದರು.
ಶಾಲೆಯಲ್ಲಿ ಇತ್ತೀಚೆಗೆ ಎಂಟನೇ ತರಗತಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಕಲಿತ ಜ್ಞಾನ ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಇದ್ದಂತೆ. ಈ ಜ್ಞಾನದ ಆಧಾರದ ಮೇಲೆ ನಿಮ್ಮ ಮುಂದಿನ ತರಗತಿಗಳಲ್ಲಿಯೂ ಕೂಡ ಶ್ರದ್ಧೆ ವಹಿಸಿ ಓದಿದಾಗ ಮಾತ್ರ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಂಪನ್ಮೂಲ ಶಿಕ್ಷಕ ವೀರೇಶ ಮೇಟಿ ಮಾತನಾಡಿ, ಓದಿನಲ್ಲಿ ಆಸಕ್ತಿ, ಏಕಾಗ್ರತೆ ಹಾಗೂ ಸತತ ಪ್ರಯತ್ನ ಈ ಮೂರು ಅಂಶಗಳು ಗೆಲುವಿನ ಮೂಲ ಮಂತ್ರಗಳಾಗಿವೆ. ಇವುಗಳನ್ನು ಪಾಲಿಸಿಕೊಂಡು ಹೋಗುವ ಯಾರೇ ಆಗಲಿ ಶೈಕ್ಷಣಿಕ ಘಟ್ಟಗಳಲ್ಲಿ ಸೋಲಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತ ಮಕ್ಕಳಿಗೆ ಹಾಗೂ ಈ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಮೂಲಕ ಉತ್ತಮ ಸೇವೆ ನೀಡಿದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಶಸ್ತಿ, ಪದಕ ನೀಡಿ ಪ್ರೋತ್ಸಾಹಿಸಲಾಯಿತು. ಎಂಟನೇ ತರಗತಿ ಮಕ್ಕಳು ಶಾಲೆಗೆ ಉಡುಗೊರೆ ನೀಡಿದರು. ನಂತರ ಎಲ್ಲ ಮಕ್ಕಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ವಸಂತ ಕುರಿ, ಸದಸ್ಯ ರಮೇಶ ಮೇಟಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಹಂಚಿನಾಳ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಲೀಲಾವತಿ, ಮಲ್ಲಿಕಾರ್ಜುನ, ಮಹೇಶ್ವರಿ, ಗೀತಾ, ಚಂದ್ರಕಲಾ, ಸುಜಾತಾ, ಸಿದ್ಧಲಿಂಗಮ್ಮ, ವೃಂದಾ, ನೀಲಪ್ಪ, ಮಲ್ಲಮ್ಮ, ಸುವರ್ಣಾ ಉಪಸ್ಥಿತರಿದ್ದರು.

ವೀರೇಶ ಮೇಟಿ, ಶಿಕ್ಷಕರು.

Leave a Reply

Your email address will not be published. Required fields are marked *