ಕೆಸಿಸಿ ಹಬ್ಬ

ಸಿನಿಮಾಗಳಲ್ಲಿ ಬೇರೆ ಭಾಷೆಯ ಚಿತ್ರರಂಗಕ್ಕೆ ಪೈಪೋಟಿ ನೀಡುವ ಸ್ಯಾಂಡಲ್​ವುಡ್ ಕಲಾವಿದರು ಕ್ರೀಡೆಯಲ್ಲೂ ಕಮ್ಮಿಯೇನಿಲ್ಲ. ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿದರೆಂದರೆ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಸಮನಾದ ಜೋಷ್ ಪ್ರದರ್ಶಿಸುತ್ತಾರೆ ಚಂದನವನದ ಹೀರೋಗಳು. ಅದಕ್ಕೆಂದೇ ಸಿದ್ಧಗೊಂಡಿದ್ದು ‘ಕನ್ನಡ ಚಲನಚಿತ್ರ ಕಪ್’ ಟೂರ್ನಿ. ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಸೆ.8 ಮತ್ತು ಸೆ.9ರಂದು ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ರಂಗೇರಿದ ‘ಕೆಸಿಸಿ’ ಕ್ರಿಕೆಟ್ ಹಬ್ಬದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಭಾಗವಹಿಸಿದರು.

ಶಿವರಾಜ್​ಕುಮಾರ್ ನಾಯಕತ್ವದ ‘ವಿಜಯನಗರ ಪೇಟ್ರಿಯಾಟ್ಸ್’, ಪುನೀತ್ ನಾಯಕತ್ವದ ‘ಗಂಗಾ ವಾರಿಯರ್ಸ್’, ಯಶ್ ನೇತೃತ್ವದ ‘ರಾಷ್ಟ್ರಕೂಟ ಪ್ಯಾಂಥರ್ಸ್’, ಸುದೀಪ್ ಮುಂದಾಳತ್ವದ ‘ಕದಂಬ ಲಯನ್ಸ್’, ಉಪೇಂದ್ರ ನಾಯಕತ್ವದ ‘ಹೊಯ್ಸಳ ಈಗಲ್ಸ್’ ಮತ್ತು ಗಣೇಶ್ ನಾಯಕತ್ವದ ‘ಒಡೆಯರ್ ಚಾರ್ಜರ್ಸ್’ ತಂಡಗಳು ಹಣಾಹಣಿ ನಡೆಸುತ್ತಿದ್ದರೆ ಕ್ರೀಡಾಂಗಣದ ತುಂಬೆಲ್ಲ ಅಭಿಮಾನಿಗಳ ಹಷೋದ್ಘಾರ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ವೀರೇಂದ್ರ ಸೆಹ್ವಾಗ್, ಆಡಮ್ ಗಿಲ್ಕ್ರಿಸ್ಟ್, ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನರ್, ತಿಲಕರತ್ನೆ ದಿಲ್ಶಾನ್, ಓವೈಶಾ ಸಿನಿಮಂದಿಯ ಜತೆ ಬ್ಯಾಟ್ ಬೀಸಿದ ಪರಿಯೂ ಆಕರ್ಷಕ. ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸುತ್ತಲೇ ‘ಕೆಸಿಸಿ’ ಟೂರ್ನಿಯ ಮಜಾ ಸವಿದರು ಕ್ರೀಡಾಭಿಮಾನಿಗಳು. ಸ್ಯಾಂಡಲ್​ವುಡ್ ಮಾತ್ರವಲ್ಲದೆ, ಬಾಲಿವುಡ್ ಮಂದಿಯನ್ನೂ ‘ಕೆಸಿಸಿ’ ಆಕರ್ಷಿಸಿದ್ದು ವಿಶೇಷ. ಸುನೀಲ್ ಶೆಟ್ಟಿ, ಸೊಹೈಲ್ ಖಾನ್ ಮುಂತಾದವರು ಹಾಜರಿ ಹಾಕಿ ಸ್ಟಾರ್ ಮೆರುಗು ಹೆಚ್ಚಿಸಿದರು. ಪ್ರತಿ ಪಂದ್ಯದಲ್ಲೂ ಉಲ್ಲಾಸಮಯವಾಗಿ ‘ಟಗರು ಬಂತು ಟಗರು..’ ಹಾಡಿಗೆ ಶಿವಣ್ಣ ಕುಣಿದು ಕುಪ್ಪಳಿಸಿದ್ದು, ಮೈದಾನದ ತುಂಬೆಲ್ಲ ಸುತ್ತಾಡಿ ಯಶ್ ಹಾಗೂ ಗಣೇಶ್ ಅಭಿಮಾನಿಗಳಿಗೆ ಸೆಲ್ಪಿ ನೀಡಿದ್ದು, ಮನರಂಜನಾ ಕಾರ್ಯಕ್ರಮದಲ್ಲಿ ಹರ್ಷಿಕಾ ಪೂಣಚ್ಚ, ಭಾವನಾ ರಾವ್, ಸೋನು ಗೌಡ, ಕೃಷಿ ತಾಪಂಡ ಮುಂತಾದ ತಾರೆಯರು ಕಲರ್​ಫುಲ್ ಆಗಿ ನರ್ತಿಸಿದೆಲ್ಲ ಈ ಟೂರ್ನಿಯ ಸ್ಮರಣೀಯ ಕ್ಷಣಗಳು.

ಅಂಬರೀಶ್, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ಗೀತಾ ಶಿವರಾಜ್​ಕುಮಾರ್, ಪ್ರಿಯಾ ಸುದೀಪ್, ರಾಜ ವಂಶಸ್ಥೆ ಪ್ರಮೋದಾ ದೇವಿ, ಶರಣ್ ಮುಂತಾದವರ ಉಪಸ್ಥಿತಿ ಕೂಡ ಹೈಲೈಟ್ ಆಗಿತ್ತು. ಎರಡು ದಿನಗಳ ತೀವ್ರ ಪೈಪೋಟಿ ಬಳಿಕ ಚಾಂಪಿಯನ್ ಎನಿಸಿಕೊಂಡ ಸಂಭ್ರಮ ಗಣೇಶ್ ನಾಯಕತ್ವದ ‘ಒಡೆಯರ್ ಚಾರ್ಜರ್ಸ್’ ತಂಡಕ್ಕೆ. ‘ವಿಜಯವಾಣಿ’ ವತಿಯಿಂದ ನೀಡಲಾದ ‘ಸಿನಿಸ್ಟಾರ್ ಕ್ಯಾಪ್ಟನ್ ಆಫ್ ದಿ ಸೀಸನ್’ ಟ್ರೋಫಿಯನ್ನು ‘ವಿಆರ್​ಎಲ್’ ಸಮೂಹ ಸಂಸ್ಥೆಗಳ ಎಂ.ಡಿ. ಆನಂದ ಸಂಕೇಶ್ವರ ಅವರಿಂದ ಪಡೆದು ಮಂದಹಾಸ ಬೀರುವ ಸರದಿ ಶಿವರಾಜ್​ಕುಮಾರ್ ಅವರದ್ದಾಗಿತ್ತು.

Leave a Reply

Your email address will not be published. Required fields are marked *