ಕೆಂಭಾವಿಯಲ್ಲಿ ಶುಕ್ರವಾರ ಚಿಣ್ಣರು ಮಧುಮಕ್ಕಳಾಗಿ ಸಸಿ ಆಡಿ ಸಂಭ್ರಮಿಸಿದರು.

ಕೆಂಭಾವಿ:  ಪಟ್ಟಣವು ಸೇರಿದಂತೆ ವಲಯದ ಗ್ರಾಮಗಳಲ್ಲಿ ಕಾರು ಹುಣ್ಣಿಮೆಯ ಮಾರನೆ ದಿನ ಶುಕ್ರವಾರ ಮಕ್ಕಳು ಸಸಿ ಆಟವಾಡಿ ಸಂಭ್ರಮಪಟ್ಟರು.
ಮಕ್ಕಳು ಕಳೆದ ಹತ್ತಾರು ದಿನಗಳ ಹಿಂದೆ ಟೆಂಗಿನ ಪರಟಿಯಲ್ಲಿ ಅಥವಾ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಗೋದಿ, ಸಜ್ಜೆ, ಜೋಳ್, ಬತ್ತ ಇನ್ನಿತರ ಕಾಳುಗಳನ್ನು ಹಾಕಿ ಸಸಿ ಬೆಳೆಸುತ್ತಾರೆ. ಬೆಳೆದಂತಹ ಸಸಿಗಳನ್ನು ಕಾರುಹುಣ್ಣಿಮೆಯ ಮಾರನೆ ದಿನ ಹಿರಿಯರಂತೆ ಸೀರೆಯನ್ನುಟ್ಟು ಹೊಲಗಳಿಗೆ ತೆರಳಿ ಸಸಿಗಳಿಗೆ ಪೂಜೆ ಸಲ್ಲಿಸಿ ಜನಪದ ಹಾಡುಗಳನ್ನು ಹಾಡಿ ಕುಣಿದಾಡಿ ಸಂಭ್ರಮಪಟ್ಟು ಮನೆ ಸೇರುತ್ತಾರೆ. 
ಕೆಲವು ಕಡೆ ಚಿಣ್ಣರು ಮಧುಮಕ್ಕಳಂತೆ ಶೃಂಗಾರಗೊಂಡು ಮದುವೆಯಾಟವಾಡಿ ಸಂಭ್ರಮಿಸುವ ಸಂಪ್ರದಾಯವು ಇದೆ. ಪಟ್ಟಣ ಸೇರಿದಂತೆ ಪರಸನಳ್ಳಿ, ನಗನೂರು, ಕರಡಕಲ್, ಯಾಳಗಿ, ಮುದನೂರು, ಕೂಡಲಗಿ ಗ್ರಾಮಗಳಲ್ಲಿ ಪುಟ್ಟ ಪುಟ್ಟ ಮಕ್ಕಳು ತಾವು ಬೆಳೆದ ಸಸಿಗಳೊಂದಿಗೆ ಹೊರ ವಲಯದಲ್ಲಿರುವ ದೇವಸ್ಥಾನ, ತೋಟಪಟ್ಟಿಗಳಲ್ಲಿ ಸೇರಿ ಸಸಿ ಆಟವಾಡಿ ಸಂಭ್ರಮಿಸಿದರು.
ಕಾರುಹುಣ್ಣಿಮೆಯು ಮುಂಗಾರು ಮಳೆಯ ಪ್ರಾರಂಭದ ಸಮಯದಲ್ಲಿ ಬರುವ ಈ ಹಬ್ಬವು, ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರು ಕಿರಿಯರು ಸೇರಿದಂತೆ ವಿಶೇಷವಾಗಿ ಆಚರಿಸುವ ಜನಪದ ಹಬ್ಬ ಇದಾಗಿದ್ದು, ಇಂದಿನ ಆಧುನಿಕ ಯುಗದಲ್ಲಿ ನಗರ ಪ್ರದೇಶಗಳಲ್ಲಿ ಈ ಹಬ್ಬದ ವಿಶೇಷತೆ ನಸಿಸಿ ಹೋಗುತ್ತಿದ್ದರೂ ಗ್ರಾಮೀಣ ಭಾಗಗಳಲ್ಲಿ ಇಂತಹ ಆಚರಣೆಗಳ ಜೀವಂತಿಕೆ ಇನ್ನೂ ಕಾಣಬಹುದಾಗಿದೆ.


 

Comment

Related News